ಬರ್ನ್
	 ಸ್ವಿಟ್‍ಜರ್‍ಲೆಂಡಿನ ರಾಜಧಾನಿ. ಒಂದು ರಾಜ್ಯ (ಕ್ಯಾಂಟನ್) ಮತ್ತು ರಾಜ್ಯಾಡಳಿತ ಕೇಂದ್ರ ನಗರ. ಜನಸಂಖ್ಯೆ ಮತ್ತು ವಿಸ್ತೀರ್ಣದಲ್ಲಿ ಎರಡನೆಯ ಸ್ಥಾನ ಪಡೆದಿರುವ ಈ ರಾಜ್ಯದ ವಿಸ್ತೀರ್ಣ 6,887 ಚ ಕಿಮೀ. ನಗರಜನಸಂಖ್ಯೆ 136,338 (2001) ಮಹಾನಗರ ಜನಸಂಖ್ಯೆ 3,32,494 (2001) ಸ್ವಿಟ್‍ಜರ್‍ಲೆಂಡಿನ ಪಶ್ಚಿಮದಲ್ಲಿರುವ ಈ ರಾಜ್ಯದಲ್ಲಿ ಅರ್ ನದಿ ತನ್ನ ಕೂಡು ನದಿಗಳಾದ ಸಾನ್ ಮತ್ತು ಎಮ್‍ಗಳೊಡಗೂಡಿ ಹರಿಯುತ್ತ ಮಾರ್ಗದಲ್ಲಿ ಬ್ರೀಯನ್ಸ ಮತ್ತು ತೂನ್ ಸರೋವರಗಳನ್ನು ಹಾದು ಮುಂದೆ ಹೋಗುತ್ತದೆ. 1334 ರಿಂದ 1815ರ ತನಕ ಈ ರಾಜ್ಯ ವಿಸ್ತರಿಸಿಕೊಂಡು ಹೋಯಿತು. 1803 ರಿಂದ 1814ರ ತನಕ ಸ್ವಿಟ್‍ಜóರ್‍ಲೆಂಡ್ ಒಕ್ಕೂಟದ ನಿರ್ದೇಶಕ ರಾಜ್ಯಗಳಲ್ಲಿ ಬರ್ನ್ ಒಂದಾಗಿತ್ತು. 1906ರಲ್ಲಿ 9 ಮಂದಿಯ ಚುನಾಯಿತ ಆಡಳಿತ ಸಭೆ ರಾಜ್ಯದ ಆಡಳಿತ ನಡೆಸತೊಡಗಿತು. ವ್ಯವಸಾಯ, ಪಶುಪಾಲನೆ, ದ್ರಾಕ್ಷಿ ಬೇಸಾಯ ರಾಜ್ಯದ ಮುಖ್ಯ ಕಸಬುಗಳು. ಗಡಿಯಾರಗಳ ತಯಾರಿಕೆ ಇಲ್ಲಿಯ ಮುಖ್ಯ ಉದ್ಯೋಗಗಳಲ್ಲಿ ಪ್ರಥಮವಾದದ್ದೆನ್ನಬಹುದು. ಬ್ರೀಯನ್ಸ್, ತೂನ್, ಕೆನೆಟ್ಸ್, ಬರ್ಕಡಾರ್ಫ್, ಬೋಲಿನ್ ಜನ್, ಮತ್ತು ಪೊರ್ಯಾನ್ ಟ್ರವೀ ಇವು ರಾಜ್ಯದ ಕೆಲವು ಮುಖ್ಯ ಪಟ್ಟಣಗಳು.

	ದೇಶದ ಮತ್ತು ರಾಜ್ಯದ ರಾಜಧಾನಿ ಬರ್ನ್ ನಗರ ಸ್ವಿಟ್‍ಜóರ್‍ಲೆಂಡಿನ ವಾಯುವ್ಯದಲ್ಲಿ ಆರ್ ನದಿಯ ದಂಡೆಯಮೇಲಿದೆ. ಜೂóರಿಚ್‍ಗೆ ನೈಋತ್ಯದಲ್ಲಿ 95 ಕಿಮೀ ದೂರದಲ್ಲಿದೆ. ಬರ್ನ್‍ನಗರದ ಪ್ರಧಾನ ಕೈಗಾರಿಕೆಗಳು ಚಾಕೊಲೆಟ್, ಯಂತ್ರೋಪಕರಣ, ಬಟ್ಟೆ, ರಾಸಾಯನಿಕ ವಸ್ತು ಹಾಗೂ ಔಷಧಗಳ ತಯಾರಿಕೆ. ನಗರಕ್ಕೆ ಸುಮಾರು 10 ಕಿಮೀ ದೂರದಲ್ಲಿ ಬೆಲ್ಟ್ ಮೂಸ್ ವಿಮಾನ ನಿಲ್ದಾಣವಿದ್ದು, ಬರ್ನ್ ಮತ್ತು ಜûೂರಿಚ್ ಅಂತರ ರಾಷ್ಟ್ರಿಯ ವಿಮಾನ ನಿಲ್ದಾಣಗಳ ನಡುವೆ ಸಂಪರ್ಕವಿದೆ. ಬರ್ನ್ ನಗರ ಇಲ್ಲಿಯ ಪ್ರಮುಖ ರೈಲ್ವೆ ಕೂಡು ನಿಲ್ದಾಣಗಳಲ್ಲೊಂದು ಬರ್ನ್ ನಗರದಲ್ಲಿ 1834ರಲ್ಲಿ ಪ್ರಾರಂಭವಾದ ವಿಶ್ವವಿದ್ಯಾನಿಲಯ ಮತ್ತು ಸ್ವಿಸ್ ರಾಷ್ಟ್ರೀಯ ಗ್ರಂಥಾಲಯವಿದೆ. ಇಲ್ಲಿ ಅಂಚೆ, ತಂತಿ ಮತ್ತು ರೈಲ್ವೆ ಸಂಘಗಳ ಅಂತರರಾಷ್ಟ್ರೀಯ ಕೇಂದ್ರಗಳಿವೆ. ಸ್ವಿಸ್ ರಾಷ್ಟ್ರೀಯ ಬ್ಯಾಂಕಿನ ಕೇಂದ್ರ ಕಚೇರಿಯುಂಟು.

	ಬರ್ನ್ ನಗರದ ಹೊಸ ಬಡಾವಣೆಗಳಿಗೆ ಆರ್ ನದಿಯ ಮೇಲಣ ಹಲವಾರು ಸೇತುವೆಗಳಿಂದ ಸಂಪರ್ಕಹೊಂದಿರುವ ಹಳೆಯ ನಗರ ಮಧ್ಯಯುಗದ ವಾತಾವರಣದಲ್ಲೇ ಇದೆ. ಕಮಾನು ಸೇತುವೆಗಳ ಮೇಲಣದಾರಿಗಳು, ಕಟ್ಟಡಗಳ ಗೋಪುರಗಳು 16ನೆಯ ಶತಮಾನದ ಕಾರಂಜಿಗಳು ಈ ನಗರದ ವೈಶಿಷ್ಟ್ಯ. 100 ಮೀ ಎತ್ತರದ ಗಾತಿಕ್ ಶಿಲ್ಪ ಶೈಲಿಯ ಚರ್ಚ್ ಪ್ರಧಾನವಾಗಿ ಸುತ್ತಲೂ ಕಾಣುವ ಕಟ್ಟಡ. ಹಳೆಯ ದುರ್ಗದ ನಿವೇಶನದಲ್ಲಿ ನೈಡೆಜ್ ಚರ್ಚ್ ನಿರಮಾಣವಾಗಿದೆ (1494) ಹಳೆಯ ಅರಮನೆಯಲ್ಲಿ ಪಾರ್ಲಿಮೆಂಟ್ ಮತ್ತು ನ್ಯಾಷನಲ್ ಲೈಬ್ರರಿ ಇತಿಹಾಸ, ಪ್ರಾಣಿಶಾಸ್ತ್ರ ಹಾಗೂ ಕಲೆಗಳಿಗೆ ಸಂಬಂಧಪಟ್ಟ ವಸ್ತು ಸಂಗ್ರಹಾಲಯಗಳು ಇವೆ.

	ಆರ್ ನದಿ ಬಳಿಯ ನೈಡೆಜ್ ಪ್ರಾಚೀನ ದುರ್ಗವನ್ನು ಉಪಯೋಗಿಸಿಕೊಳ್ಳಲು ಜಾóರಿನ್‍ಜೆನ್ನಿನ ಡ್ಯೂಕ್ 5ನೆಯ ಬರ್ಟ್‍ಹೋಲ್ಡ್ ಎಂಬಾತ 1191ರಲ್ಲಿ ಬರ್ನ್ ಪಟ್ಟಣವನ್ನು ಸ್ಥಾಪಿಸಿದ. ಪಟ್ಟಣದ ಕೋಟೆಯ ಗೋಡೆಯನ್ನು 1256, 1346 ಮತ್ತು 1622ರಲ್ಲಿ ವಿಸ್ತರಿಸಲಾಯಿತು. ಜಾರಿನ್‍ಜಿನ್ ಮನೆತನ ಕೊನೆಗೊಂಡ ಮೇಲೆ (1218) ಬರ್ನ್ ಮುಕ್ತ ಪಟ್ಟಣವಾಗಿ, ಕಾಲಕ್ರಮದಲ್ಲಿ ಸುತ್ತಮುತ್ತಲ ಪ್ರದೇಶಗಳನ್ನು ಗೆದ್ದುಕೊಂಡು ಬಲಗೊಂಡಿತು. 1291ರಲ್ಲಿ ಸ್ಥಾಪಿತವಾದ ಸ್ವಿಟ್‍ಜóರ್‍ಲೆಂಡ್ ರಾಜ್ಯಗಳ ಒಕ್ಕೂಟವನ್ನು ಸೇರಿತು. (1353). 18ನೆಯ ಶತಮಾನದಲ್ಲಿ ಬರ್ನ್ 52 ಪ್ರಾಂತ್ಯಗಳ ಮೇಲೆ ಅಡಳಿತಾಧಿಕಾರ ಹೊಂದಿತ್ತು. ಅದರ ರಾಜಕೀಯ ಪ್ರಭಾವವನ್ನು ತಗ್ಗಿಸಲು 1723 ಮತ್ತು 1749ರಲ್ಲಿ ಪ್ರಯತ್ನಗಳಾಗಿ ಕೊನೆಗೆ 1831ರಲ್ಲಿ ಅದರ ಬಲಕುಗ್ಗಿತು. 1848ರಲ್ಲಿ ಬರ್ನ್‍ಸ್ವಿಟ್‍ಜರ್‍ಲೆಂಡ್ ಒಕ್ಕೂಟದ ರಾಜಧಾನಿಯಾಯಿತು. 	
(ವಿ.ಜಿ.ಕೆ.)